ಗಾಳಿಯ ಚಾಳಿಯ ಅರಸುವ ಲೆಕ್ಕ!
ಐ.ಸಿ.ಟಿ. ಎಸ್.ನ ಗಣಿತಶಾಸ್ತ್ರಜ್ಞರೊಬ್ಬರು ಈ ಸಂಕೀರ್ಣವಾದ ಲೆಕ್ಕ ಮಾಡಲು ಪ್ರಯತ್ನಿಸುತ್ತಿದ್ದಾರೆ.

Vacuum Architect at
Thermofisher Scientific
To read this story in English, go to page 1.
ಸುಂಟರಗಾಳಿ ಅಥವ ಚಂಡಮಾರುತ ಎಂಬ ಹೆಸರಿನ ಪ್ರಾಕೃತಿಕ ವಿದ್ಯಮಾನ ಹೇಗೆ ಕರಾವಳಿ ಸಮುದಾಯಗಳ ಮೇಲೆ ಎರಗಿ ವಿನಾಶಕಾರಿ ಸಿಡಿಲು-ಬಿರುಗಾಳಿ-ಮಳೆಗಳಿಂದ ಜೀವ-ಜೀವನೋಪಾಯಗಳ ಹಾನಿ ಮಾಡುತ್ತೆ ಅಂತ ನಮಗೆ ಗೊತ್ತೇ ಇದೆ. ಈ ಬಿರುಗಾಳಿಯ ಹಾದಿಯನ್ನ ಮುಂಚಿತವಾಗಿ ಗುರುತಿಸಿದರೆ ಮುನ್ನೆಚ್ಚರಿಕೆ ಕ್ರಮಗಳ ಮೂಲಕ ಆಗುವ ನಷ್ಟವನ್ನ ಕಡಿಮೆ ಮಾಡಬಹುದು.
ಆದರೆ ಈ ಹಾದಿಯನ್ನ ಮುಂಚಿತವಾಗಿ ಗುರಿತಿಸೋದು ವಿಜ್ಞಾನಿಗಳಿಗೆ ಸವಾಲಾಗಿದೆ. ಉದಾಹರಣೆಗೆ, ಜೂನ್ 2023ರಲ್ಲಿ ಅರಬ್ಬೀ ಸಮುದ್ರದ ಮಧ್ಯದಿಂದ ಸ್ವಲ್ಪ ಪೂರ್ವದಲ್ಲಿ ಆರಂಭವಾದ ಬಿಪರ್‌ಜೋಯ್ ಚಂಡಮಾರುತ ತನ್ನ 13 ದಿನಗಳಲ್ಲಿ ಒಂಭತ್ತು ಸಲ ಹಾದಿ ಬದಲಿಸಿತ್ತು. ಈ ಗೋಜಲಾದ ಸಮಸ್ಯೆಯ ಪರಿಹಾರ ಐಸಿಟಿಎಸ್-ಟಿಐಎಫ಼್ಆರ್ ನ ಒಬ್ಬ ಗಣಿತಜ್ಞನಿಗೆ ಕಾಣಿಸಿರೋಹಾಗಿದೆ.

ಸಮುದ್ರದ ಮೇಲಿನ ಉಷ್ಣಾಂಶ ಎಲ್ಲಾದರೂ 26 ಡಿಗ್ರೀ ಮೇಲೆ ಹೋದಾಗ ಅಲ್ಲಿನ ಗಾಳಿಪದರದಲ್ಲಿನ ಒತ್ತಡ ಕುಗ್ಗುತ್ತೆ. ಭೂಮಿಯ ಪರಿಭ್ರಮಣದಿಂದ ಗಾಳಿಗೆ ತಿರುವು ಸಿಕ್ಕಿ ಬಿರುಗಾಳಿಗಳು ಉಂಟಾಗುತ್ತೆ. ಈ ಸುಂಟರಗಾಳಿಗಳಿಗೆ ಜಗತ್ತಲ್ಲಿ ವಿಧವಿಧವಾದ ಹೆಸರುಗಳಿವೆ: ಸೈಕ್ಲೋನ್, ಹರಿಕೇನ್, ಟೈಫ಼ೂನ್ ಇತ್ಯಾದಿ.
ಉಷ್ಣವಲಯದಲ್ಲಿರೋ ಇಂಡಿಯಾ ದೇಶಕ್ಕೆ ಈ ಸುಂಟರಗಾಳಿಗಳ ಬಾಧೆ ಆಗಾಗ ತಾಕುತ್ತೆ, ಹೆಚ್ಚಾಗಿ ಅರಬ್ಬೀ ಸಮುದ್ರಕ್ಕಿಂತ ಬಂಗಾಳ ಕೊಲ್ಲಿಯಿಂದ. ಸಾಧಾರಣವಾಗಿ ಸುಂಟರಗಾಳಿಗೆ ಹುಟ್ಟೆಡೆಯಿಂದ ದಡಕ್ಕೆ ತಲುಪೋಕ್ಕೆ ಒಂದು ವಾರದವರೆಗು ಹಿಡಿದು, ಈ ಹೊತ್ತಲ್ಲಿ ಮುನ್ಸೂಚಕರು ಅದರ ಹಾದಿ ಮತ್ತು ತೀಕ್ಷ್ಣತೆಯನ್ನ ಲೆಕ್ಕ ಮಾಡಿ ಹಾದಿಯ ಜನಸಮುದಾಯಗಳಿಗೆ ಸಿದ್ಧವಾಗೋಕ್ಕೆ ಸಹಾಯ ಮಾಡಲು ಹೊಯ್ದಾಡುತ್ತಾರೆ.
ಸುಂಟರಗಾಳಿಯ ಹುಟ್ಟು-ಬೆಳವಣಿಗೆಯನ್ನ ಮುಂಚಿತವಾಗಿ ಗುರುತಿಸೋಕ್ಕೆ ಗಣಿತಜ್ಞರು ಸಮುದ್ರಗಳ ಮತ್ತು ಗಾಳಿಮಂಡಲದ ಗಣಿತ-ಪ್ರತಿಕೃತಿಯನ್ನ (ಮಾಡಲ್) ಬಳಸುತ್ತಾರೆ. ಆದರೆ ಈ ಪ್ರತಿಕೃತಿಗಳಲ್ಲಿ ಅತಿ ಹೆಚ್ಚು ನಿಯತಾಂಕಗಳು (ಪರಾಮಿಟರ್‌ಗಳು) ಇರುತ್ತವೆ. ಉದಾಹರಣೆಗೆ ಸಮುದ್ರದ ಮೇಲ್ಪದರದ ಹಾಗು ಗಾಳಿಯ ಉಷ್ಣಾಂಶ ಮತ್ತು ಒತ್ತಡಗಳು, ಇವುಗಳ ಸ್ಥಳೀಯ ವ್ಯತ್ಯಾಸಗಳು, ಪದರಗಳ ನಡುವಿನ ವ್ಯತ್ಯಾಸಗಳು, ಗಾಳಿಯ ಸ್ಥಳೀಯ ಹರಿವು ಇತ್ಯಾದಿ. ಇವೆಲ್ಲಾ ನಿಖರವಾಗಿ ತಿಳಿದಿದ್ದರೆ, ಗಣಿತ-ಪ್ರತಿಕೃತಿಗಳ ಮೂಲಕ ಸುಂಟರಗಾಳಿಯ ನಿಖರವಾದ ಹಾದಿಯನ್ನ ಕಂಪ್ಯೂಟರ್‌ಗಳ ಮೂಲಕ ಲೆಕ್ಕಹಾಕಬಹುದು.
ತಿಳಿದಿರುವ ವಿಧಾನಗಳು
ಈ ಮುನ್ಸೂಚನಾಕಾರ್ಯಕ್ಕೆ ಎರಡು ಮುಖ್ಯ ಅಡತಡೆಗಳು ಇವೆ. ಒಂದನೇದು, ಸುಂಟರಗಾಳಿಯ ಹಾದಿ ಮತ್ತು ಬೆಳವಣಿಗೆಗೆ ವ್ಯತ್ಯಾಸ ಮಾಡೊ ಎಲ್ಲಾ ಅಂಶಗಳನ್ನೂ ಲೆಕ್ಕಕ್ಕೆ ತೆಗೆದುಕೊಳ್ಳೋ ಒಂದು ಪ್ರತಿಕೃತಿ ಇಲ್ಲ. ಎರಡನೇದು, ಈ ಎಲ್ಲಾ ಅಂಶಗಳನ್ನ ಅವುಗಳ ನಡುವಿನ ಸಂಬಂಧಗಳ ಜೊತೆ ಲೆಕ್ಕಕ್ಕೆ ತೆಗೆದುಕೊಳ್ಳೋ ನೈಜ ಪ್ರತಿಕೃತಿಯನ್ನ ಬಳಸಿ ಲೆಕ್ಕ ಹಾಕೋದು ಅತಿ ಆಧುನಿಕ ಕಂಪ್ಯೂಟರ್‌ಗಳಿಗೂ ಎಟುಕೋಲ್ಲ.
ಜಗತ್ತಿನಾದ್ಯಂತ ಹವಾಮಾನಶಾಸ್ತ್ರದ ಸಂಶೋಧಕರು ಈ ಸಮಸ್ಯೆಯನ್ನ ಹಲವಾರು ರೀತಿಯಲ್ಲಿ ಬಗೆಹರಿಸುತ್ತಿದ್ದಾರೆ. ಕೆಲವರು ದಶಕಗಳಿಂದ ದಾಖಲಿಸಿರೋ (ಇದೇ ಸಮುದ್ರದಲ್ಲಿನ ಅಥವ ಪ್ರತಿ ವರ್ಷ ಇದೇ ಸಮಯಕ್ಕೆ ಬರೋ) ಹಳೆಯ ಸುಂಟರಗಾಳಿಗಳ ಮಾಹಿತಿಯನ್ನ ಬಳಸಿ ಗಣಿತ-ಪ್ರತಿಕೃತಿಯನ್ನ ಕಟ್ಟುತ್ತಾರೆ. ಜೊತೆಗೆ ಆ ಸುಂಟರಗಾಳಿಯ ಕಳೆದ 6 ರಿಂದ 12 ಘಂಟೆಗಳ ಚಲನೆಯನ್ನ ಗಮನಿಸಿ ಅದರ ಮುಂದಿನ ಹಂತವನ್ನ ಅಂದಾಜು ಮಾಡುತ್ತಾರೆ. ಆದರೆ ಈ ವಿಧಾನದಿಂದ ಮುಂದಿನ 24 ಘಂಟೆಗಳನ್ನ ಮಾತ್ರ ಮುನ್ಸೂಚನೆ ಮಾಡಬಹುದು.
ಇನ್ನು ಕೆಲವರು ಇದೇ ಸಮುದ್ರದಲ್ಲಿನ ಹಳೆಯ ಸುಂಟರಗಾಳಿಗಳ ಸರಾಸರಿ ನಡುವಳಿಕೆಯನ್ನ ಬಳಸಿ ಮುಂದಿನ ಸುಂಟರಗಾಳಿಯ ರೂಪವನ್ನ ಅಂದಾಜು ಮಾಡುತ್ತಾರೆ. ಆದರೆ ಸಮುದ್ರ ಮತ್ತು ಗಾಳಿಪದರ ಹಿಂದಲ್ಲಿನ ಹೋಲಿಕೆಯಲ್ಲಿ ಬಹಳವಾಗಿ ಬದಲಾಗಿದ್ದು ಈ ರೀತಿ ಸುಂಟರಗಾಳಿಯ ಹಾದಿಯನ್ನ ಅಂದಾಜು ಮಾಡೋದರಲ್ಲಿ ತಪ್ಪಿನ ಸಾಧ್ಯತೆ ಹೆಚ್ಚು.
ಭಾರತೀಯ ಹವಾಮಾನ ವಿಭಾಗ (ಇಂಡಿಯನ್ ಮೀಟಿಯರೋಲಾಜಿಕಲ್ ಡಿಪಾರ್ಟ್‌ಮೆಂಟ್, ಐಎಮ್‌ಡಿ) ಈ ಎರಡೂ ತಂತ್ರಗಳನ್ನ ಒಟ್ಟಾಗಿ ಬಳಸುತ್ತೆ. ಆದರೆ ಈ ವಿಧಾನದಲ್ಲೂ ಸದರಿ ‘ನಿಯತಾಂಕ-ನಿಖರತೆಯ’ ಸಮಸ್ಯೆ ಇದೆ. ಅಂದರೆ, ಲೆಕ್ಕದಲ್ಲಿ ಬರೋ ಅತ್ಯನೇಕ ನಿಯತಾಂಕಗಳನ್ನೆಲ್ಲಾ ನಿಖರವಾಗಿ ಅಂದಾಜು ಮಾಡೋಕ್ಕಾಗದ ಕಾರಣ ಸುಂಟರಗಾಳಿಯ ಹಾದಿಯ ಲೆಕ್ಕದಲ್ಲೂ ಅನಿಶ್ಚಿತತೆಗಳು ಹಿಗ್ಗಿ ಕೈಮೀರಿಹೋಗುತ್ತೆ. ಈ ಅನಿಶ್ಚಿತತೆಯನ್ನ ಪರಿಹರಿಸಲು ಐಎಮ್‌ಡಿ ತಮ್ಮ ವಿಧಾನದಲ್ಲಿ ಕೆಲವು ನಿಗದಿತ ಪಥಗಳು ಮಾತ್ರ ಸಾಧ್ಯ ಎಂಬಂತೆ ಕಟ್ಟು ಮಾಡುತ್ತಾರೆ. ಈ ಕಾರಣ ಮುನ್ಸೂಚನೆ ಸ್ವಲ್ಪ ನಿಖರತೆ ಕಳೆದುಕೊಳ್ಳುತ್ತೆ. ಐಎಮ್‌ಡಿ ಯ ವಿಜ್ಞಾನಿಗಳು ಮುನ್ಸೂಚನೆಯನ್ನ ಉತ್ತಮವಾಗಿಸಲು ಸದಾ ಪ್ರಯತ್ನ ಮಾಡುತ್ತಿರುತ್ತಾರೆ.

ಕೋಳಿ ಮತ್ತು ಮೊಟ್ಟೆ ಸಮಸ್ಯೆ
ಸುಂಟರಗಾಳಿಯ ಕೇಂದ್ರವಾದ ಅದರ ‘ಕಣ್ಣು’ ಹುಟ್ಟಲು ಬೆಚ್ಚಗಿನ ನೀರಿನ ಅಗತ್ಯ ಇದೆ. ಈ ಕಣ್ಣ ಹತ್ತಿರದ, ಸಮುದ್ರದ ಒಳಗಿನ ಮತ್ತು ಮೇಲಿನ, ಪರಿಸರ ಸುಂಟರಗಾಳಿಯ ಹಾದಿ ಮತ್ತು ಬೆಳವಣಿಗೆಯ ವೇಗವನ್ನ ನಿರ್ಧರಿಸುತ್ತೆ. ಆದರೆ ಹುಟ್ಟೋ ಬಿರುಗಾಳಿಯೇ ಈ ಪರಿಸರವನ್ನ ಬದಲಾಯಿಸೋದರಿಂದ ಲೆಕ್ಕ ಹಾಕುವುದು ‘ಕೋಳಿ ಮೊದಲಾ ಮೊಟ್ಟೆ ಮೊದಲಾ’ ಎಂಬಂತಾಗುತ್ತೆ.
ಇದನ್ನ ನಿವಾರಿಸೋಕ್ಕೆ ಕೆಲ ವಿಜ್ಞಾನಿಗಳು ಸುಂಟರಗಾಳಿಯ ಹುಟ್ಟಿಗೆ ಕಾರಣಾವಾದ ಸಮುದ್ರದ ಮತ್ತು ಗಾಳಿಪದರದ ಪರಿಸ್ಥಿತಿಗಳನ್ನ ತಾವೇ ಲೆಕ್ಕಹಾಕದೆ ಈ ರೀತಿ ಅಳತೆಗಳನ್ನ ಮಾಡುತ್ತಿರೋ ಹವಾಮಾನ ಕೇಂದ್ರಗಳಿಂದ ಪಡೆದು ಅವುಗಳನ್ನ ತಮ್ಮ ಪ್ರತಿಕೃತಿಗಳಲ್ಲಿ ಉಪಯೋಗಿಸಿ ಕಂಪ್ಯೂಟರ್‌ನಲ್ಲಿ ಸುಂಟರಗಾಳಿಯ ಹಾದಿಯನ್ನ ಲೆಕ್ಕ ಹಾಕುತ್ತಾರೆ. ಹೀಗೆ ಹೊರಗಿಂದ ಅಳತೆಗಳನ್ನ ಸೇರಿಸೋದರಿಂದ ತಮ್ಮ ಪ್ರತಿಕೃತಿಯನ್ನ ಪೂರ್ತಿಯಾಗಿ ಒರೆಹಚ್ಚಲು ಆಗೋದಿಲ್ಲ.
ಬೆಂಗಳೂರಿನ ಐಸಿಟಿಎಸ್-ಟಿಐಎಫ಼್ಆರ್ ನ ಗಣಿತಜ್ಞ ವಿಷಾಲ್ ವಾಸನ್ ಪ್ರಕಾರ ಇದಕ್ಕೆ ಪರಿಹಾರ ಸುಂಟರಗಾಳಿಯ ಅಳತೆಗಳ ಮಾಹಿತಿಯನ್ನ ಬಳಸಿ ಗಣಿತ-ಪ್ರತಿಕೃತಿಗಳನ್ನ ಪರಿಷ್ಕರಿಸೋದು. ನೇರವಾಗಿ ಸುಂಟರಗಾಳಿಯಲ್ಲೇ ಅಳತೆಗಳನ್ನ ಮಾಡೋದಕ್ಕಾಗದೇ ಇದ್ದರೂ, ವಿಜ್ಞಾನಿಗಳು ಉಪಗ್ರಹ ಮತ್ತು ಭೂಕೇಂದ್ರಗಳ ಅಳತೆಗಳನ್ನ ಇದಕ್ಕಾಗಿ ಬಳಸಬಹುದು. ಆದರೆ ಭಾರತದಲ್ಲಿರೋ 500 ಸಂಖ್ಯೆ ಭೂಕೇಂದ್ರಗಳು ಪ್ರದೇಶದ ಹರವಿಗೆ ಕಮ್ಮಿಯೇ.
ವಿಜ್ಞಾನಿಗಳು ಈ ಭೂಕೇಂದ್ರಗಳಿಂದ ಒಮ್ಮೊಮ್ಮೆ ದೊರಕೋ ಕೆಲವು ಮಾಹಿತಿಯನ್ನ ಉದಾಹರಣೆಗೆ ಉಷ್ಣಾಂಶ, ಗಾಳಿವೇಗ, ಒತ್ತಡ, ತೇವಾಂಶ, ಮಳೆಹನಿ ಗಾತ್ರ, ಸಲ್ಫ಼ೈಟ್ಸ್ ನೈಟ್ರೈಟ್ಸ್ ಇನ್ನಿತರ ರಾಸಾಯನಿಕ ಪದಾರ್ಥಗಳ ಮಟ್ಟ ಇತ್ಯಾದಿ ಉಪಗ್ರಹ ಮಾಹಿತಿಯನ್ನ ಗಾಳಿಯಲ್ಲಿರೋ ನೀರಿನಾಂಶ, ಪ್ರದೇಶದಲ್ಲಿರೋ ಮೋಡದ ಪ್ರಮಾಣ ಅಥವ ರಾಸಾಯನಿಕ ಪ್ರಮಾಣಗಳು (ಆಮ್ಲಜನಕ ಇತ್ಯಾದಿ) ಇವುಗಳಿಗೆ ಬಳಸುತ್ತಾರೆ. ಉಪಗ್ರಹಗಳು ಭೂಮಿಯ ಮೇಲ್ಪದರದ ಕಾವನ್ನೂ ಅಳತೆ ಮಾಡುತ್ತವೆ, ಇದರಿಂದ ಅಲ್ಲಿನ ಗಾಳಿಯ ಕಾವಿನ ಬಗ್ಗೆ ತಿಳಿಯಬಹುದು.
ನಿರೀಕ್ಷಿತ ಪರಿಹಾರ
ದೊರಕುವ ಈ ಚದುರಿದ ಮತ್ತು ವಿರಳವಾದ ಮಾಹಿತಿಯನ್ನ ತಿಳಿದ ಗಣಿತ-ಪ್ರತಿಕೃತಿಗಳ ಜೊತೆ ತಾಳೆ ಮಾಡೋದು ವಿಶಾಲ್‌ರ ಪ್ರಸ್ತಾವನೆ. ಗಣಿತದ ಪರಿಭಾಷೆಯಲ್ಲಿ ಈ ವಿಧಾನಕ್ಕೆ ‘ಇನ್ವರ್ಸ್ ಪ್ರಾಬ್ಲಮ್’ ಅನ್ನುತ್ತಾರೆ. ಗಣಿತಜ್ಞರು, ಅವರ ಪ್ರಕಾರ, ಹಲವಾರು ಸಮಸ್ಯೆಗಳನ್ನ ಈ ‘ಇನ್ವರ್ಸ್ ಪ್ರಾಬ್ಲಮ್’ ರೂಪದಲ್ಲಿ ತೋರಿಸಬಹುದು. ಉದಾಹರಣೆಗೆ ಇಂಜಿನಿಯರ್ ಮಂದಿ ನಿಸರ್ಗಾನಿಲದ ಹುಡುಕಾಟದಲ್ಲಿ ಧ್ವನಿಯಲೆಗಳ ಅಧ್ಯಯನ ಮಾಡುವಾಗ ಅಥವ ಸೂಕ್ಷ್ಮಾಣು ವಿಜ್ಞಾನಿಗಳು ಮೂಲಕಣದ ತಾಕುವಿಕೆಯಿಂದ ಬೇರೇ ಕಣಗಳ ಹಾದಿಗಳ ಮೇಲಾಗುವ ಪರಿಣಾಮವನ್ನ ಬಳಸಿ ಮೂಲಕಣದ ಗುಣಲಕ್ಷಣಗಳ ಅಧ್ಯಯನ ಮಾಡುವಾಗ.
ಈ ‘ಇನ್ವರ್ಸ್ ಪ್ರಾಬ್ಲಮ್’ ನ ಪರಿಹಾರದಿಂದ ಗಣಿತಜ್ಞರು ವ್ಯವಸ್ಥಿತವಾಗಿ ಗಣಿತ-ಪ್ರತಿಕೃತಿಗಳ ಬಗ್ಗೆ ನಿರ್ದಿಷ್ಟ ಪ್ರಶ್ನೆಗಳಿಗೆ ಉತ್ತರವನ್ನ ಕೊಡಬಹುದು. ವಿಶಾಲ್ ಯಶಸ್ವಿಯಾದರೆ, ಒಂದು ಸುಂಟರಗಾಳಿಯ ಹಾದಿಯನ್ನ ಗಮನಿಸಿ ಮತ್ತು ಗಣಿತ-ಪ್ರತಿಕೃತಿಗಳನ್ನ ಬಳಸಿ ಆ ಸುಂಟರಗಾಳಿಯ ಸುತ್ತಮುತ್ತಲಿನ ಪರಿಸರ ಹಾಗು ಅದರ ವೇಗವನ್ನ ಲೆಕ್ಕ ಹಾಕಬಹುದು. “ನಾನು ಸರಳೀಕೃತ ಪ್ರತಿಕೃತಿಗಳನ್ನ ಹಾಗು ಸಂಕೀರ್ಣ ಮಾಹಿತಿಯನ್ನ ಒಟ್ಟಾಗಿ ಬಳಸಿ ಗಾಳಿಪದರದ ಸ್ಥಿತಿಯನ್ನ ಅಂದಾಜು ಮಾಡಬಹುದು,” ಅಂತಾರೆ ವಿಶಾಲ್.
ಈ ಗಾಳಿಪದರದ ಸ್ಥಿತಿಯ ಅಂದಾಜು ಸುಂಟರಗಾಳಿಯ ಹಾದಿಯ ಮುನ್ಸೂಚನೆ ಮಾಡಲು ಅನುವು ಮಡುತ್ತೆ. “ಸುಂಟರಗಾಳಿಯ ಚಲನೆಗಿಂತ ಬೇಗ ನಮ್ಮ ಈ ಲೆಕ್ಕ ಪರಿಹಾರದತ್ತ ತಲುಪತ್ತೆ ಅನ್ನೋದು ನಮ್ಮ ಆಶಯ. ಇಲ್ಲದಿದ್ರೆ ಈ ಪ್ರಯತ್ನ ವ್ಯರ್ಥ!” ಅಂತಾರೆ ಕೊನೆಯದಾಗಿ.
ಅನುವಾದ: ನರೇನ್ ಹೂವಿನಕಟ್ಟೆ, ವ್ಯಾಕ್ಯೂಮ್ ಆರ್ಕಿಟೆಕ್ಟ್, ಥರ್ಮೋಫ಼ಿಷರ್ ಸೈಂಟಿಫಿಕ್, ನೆದರಲ್ಯಾಂಡ್ಸ್.
ಕರಡು ಪರಿಶೀಲನೆ: ಜೀವ ಎಂ, ಐ ಸಿ ಟಿ ಎಸ್-ಟಿ ಐ ಎಫ್ ಆರ್.
